Taxform ತುಂಬುವಾಗ ತೆರಿಗೆ ಭರಣಾ ದಿಂದ ರಿಯಾಯಿತಿ ಪಡೆಯಲು ಇರುವ ಕಲಂಗಳು.
ಆದಾಯ ತೆರಿಗೆ ಕುರಿತಾದ ಸುದ್ದಿಗಳು :-
ಆದಾಯದ ಮೇಲಿನ ತೆರಿಗೆ ಇಳಿಕೆ
ನವದೆಹಲಿ: ಈ ಬಾರಿ ಬಜೆಟ್ನಲ್ಲಿ ವಾರ್ಷಿಕ ₹2.5 ಲಕ್ಷದಿಂದ ₹5 ಲಕ್ಷದವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇ 10ರಿಂದ ಶೇ 5ಕ್ಕೆ ಇಳಿಸಲಾಗಿದೆ.
ಆದರೆ ಆದಾಯ ತೆರಿಗೆ ಮಿತಿಯನ್ನು ₹ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ತೆರಿಗೆದಾರರರ ತೆರಿಗೆ ಹೊರೆಯನ್ನು ಅರ್ಧದಷ್ಟು ತಪ್ಪಿಸಲಿರುವ ಈ ನಿರ್ಧಾರ ಮಧ್ಯಮ ವರ್ಗದವರಲ್ಲಿ ತುಸು ನೆಮ್ಮದಿ ಮೂಡಿಸಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ₹7,725 ಉಳಿತಾಯವಾಗಲಿದ್ದು, ₹5 ಲಕ್ಷಕ್ಕಿಂತ ಮೇಲಿನ ಎಲ್ಲ ಆದಾಯ ವರ್ಗದವರಿಗೆ ಗರಿಷ್ಠ ₹12,500 ಉಳಿತಾಯವಾಗಲಿದೆ.
*ಹೆಚ್ಚುವರಿ ತೆರಿಗೆ:*
ವಾರ್ಷಿಕ ₹50 ಲಕ್ಷದಿಂದ ₹1 ಕೋಟಿ ವರೆಗಿನ ಆದಾಯದ ಮೇಲೆ ಶೇ 10 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
₹1 ಕೋಟಿಗಿಂತ ಹೆಚ್ಚು ಆದಾಯದ ಮೇಲೆ ವಿಧಿಸಲಾಗುತ್ತಿದ್ದ ಶೇ 15 ಹೆಚ್ಚುವರಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ತೆರಿಗೆ ದರ ವಿನಾಯ್ತಿಯಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಪ್ರತಿವರ್ಷ ₹15,500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ಮತ್ತೊಂದೆಡೆ ಹೆಚ್ಚುವರಿ ತೆರಿಗೆ ಸಂಗ್ರಹದಿಂದ ₹2,700 ಕೋಟಿ ವರಮಾನ ಬರಲಿದೆ.
ಹಿರಿಯ ನಾಗರಿಕರಿಗೂ ಇದೆ ಕೊಡುಗೆ: 60 ವರ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರ ₹3 ಲಕ್ಷದವರೆಗೆ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ. 80 ವರ್ಷ ಮೇಲಿನ ಅತ್ಯಂತ ಹಿರಿಯ ನಾಗರಿಕರ ತೆರಿಗೆ ಆದಾಯ ಮಿತಿಯನ್ನು ₹5 ಲಕ್ಷಕ್ಕೆ ಏರಿಸಲಾಗಿದೆ.
ಎರಡೂ ವಿಭಾಗದಲ್ಲಿ ₹5 ಲಕ್ಷದಿಂದ ₹10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ವಿಧಿಸಲಾಗಿದೆ. ₹10 ಲಕ್ಷಕ್ಕೂ ಹೆಚ್ಚಿನ ಆದಾಯದ ಮೇಲಿನ ತೆರಿಗೆ ದರವನ್ನು ಶೇ 30ಕ್ಕೆ ನಿಗದಿಗೊಳಿಸಲಾಗಿದೆ.
*ತೆರಿಗೆ ವ್ಯಾಪ್ತಿ ವಿಸ್ತಾರ:*
ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರನ್ನು ತರಲು ಕೇವಲ ಒಂದು ಪುಟದ ಸರಳ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಅರ್ಜಿಯನ್ನು (ಐಟಿ ರಿಟರ್ನ್ಸ್) ಮುದ್ರಿಸುವುದಾಗಿ ಸಚಿವ ಜೇಟ್ಲಿ ತಿಳಿಸಿದ್ದಾರೆ.
‘ವಾಣಿಜ್ಯ ಆದಾಯ ಹೊರತುಪಡಿಸಿ ₹5 ಲಕ್ಷದವರೆಗೆ ವೈಯಕ್ತಿಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಒಂದು ಪುಟದ ಅರ್ಜಿ ತುಂಬಬೇಕಾಗುತ್ತದೆ. ಮೊದಲ ಬಾರಿಗೆ ತೆರಿಗೆ ಮಾಹಿತಿ ಸಲ್ಲಿಸುವ ತೆರಿಗೆದಾರರಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು.
ಹೆಚ್ಚಿನ ಜನರು ತೆರಿಗೆ ವ್ಯಾಪ್ತಿಗೆ ತರಲು ಶೇ 5ರಷ್ಟು ಅತ್ಯಂತ ಕಡಿಮೆ ತೆರಿಗೆ ದರ ನಿಗದಿ ಮಾಡಲಾಗಿದೆ. ಜನರು ತೆರಿಗೆಯಿಂದ ತಪ್ಪಿಸಿಕೊಳ್ಳುವ ಬದಲು ಅತ್ಯಂತ ಕಡಿಮೆ ಪ್ರಮಾಣದ ತೆರಿಗೆ ಪಾವತಿಸುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜೇಟ್ಲಿ ಮನವಿ ಮಾಡಿದರು.
* ನೌಕರ ವರ್ಗದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಜೆಟ್ ವಿಫಲವಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸು ವವರಿಗೆ ಇನ್ನೂ ಸ್ವಲ್ಪ ವಿನಾಯ್ತಿ ನೀಡಬಹುದಿತ್ತು.
–ಎಂ.ಕೆ.ನರಸಿಂಹ ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಐಎನ್ಬಿಇಎಫ್) ಕರ್ನಾಟಕ ಘಟಕ
*ಯಾರು ಹೆಚ್ಚು, ಯಾರು ಕಡಿಮೆ?*
* ₹3.5 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹5,150 ಬದಲು ₹2,575 ತೆರಿಗೆ ಪಾವತಿಸಿದರೆ ಸಾಕು
* ₹5ಲಕ್ಷದಿಂದ ₹50 ಲಕ್ಷ ಆದಾಯ ಹೊಂದಿದವರ ತೆರಿಗೆಯಲ್ಲಿ ₹12,500 ಕಡಿಮೆಯಾಗಲಿದೆ
* ₹50 ರಿಂದ ₹1 ಕೋಟಿ ಆದಾಯ ಹೊಂದಿದವರು ಶೇ 10ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ
* ₹60 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹15,91,865ರ ತೆರಿಗೆ ಬದಲಾಗಿ ₹17,36,889 ತೆರಿಗೆ ಪಾವತಿಸಬೇಕಾಗುತ್ತದೆ*.01)*ಆದಾಯ ತೆರಿಗೆ ವಿನಾಯತಿ ಪಡೆಯುವ ವಿಧಾನಗಳು*
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಉದ್ಯೋಗ ಹಾಗೂ ಅಂತಹ ಉದ್ಯೋಗದಿಂದ ದುಡಿಮೆ ಇರುವುದು ಸಹಜ. ಇದನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗುತ್ತಿದೆ. ತನ್ನ ಪ್ರಜೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಆದಾಯ ತೆರಿಗೆ ವಿಧಿಸುತ್ತದೆ. ಆದಾಯ ತೆರಿಗೆ ಎಂದಾಕ್ಷಣ ಬಹಳಷ್ಟು ಮಂದಿ ಬೆಚ್ಚಿಬೀಳುತ್ತಾರೆ! ‘ದುಡಿದದ್ದೆಲ್ಲಾ ಇನ್ಕಮ್ ಟ್ಯಾಕ್ಸ್ ಕೊಳ್ಳೇ ಹೋಯಿತು’ ಎನ್ನುವ ಉದ್ಗಾರ ಜನ ಸಾಮಾನ್ಯರಿಂದ ಕೇಳಿ ಬರುತ್ತದೆ.
ಆದಾಯ ತೆರಿಗೆ ಎನ್ನುವ ಪದದ ಅರ್ಥ ಆದಾಯವಿದ್ದವರೆಲ್ಲಾ ಆದಾಯ ತೆರಿಗೆ ಕೊಡಬೇಕು ಎಂದಲ್ಲ. ನಿರ್ದಿಷ್ಟ ಮಟ್ಟದ ಆದಾಯ ಇರುವ ಪ್ರಜೆಗಳಿಂದ ಸರ್ಕಾರ ತೆರಿಗೆ ವಸೂಲಾತಿ ಮಾಡುತ್ತದೆ. ಇದೇ ವೇಳೆ ತೆರಿಗೆ ವಿನಾಯಿತಿ ಪಡೆಯಲು ಕೂಡಾ ಬಹಳಷ್ಟು ಉಳಿತಾಯ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಈ ಪ್ರಕ್ರಿಯೆಯಲ್ಲಿ ತೆರಿಗೆ ಹೊರೆಯಿಂದಹೊರಬಂದು ಉಳಿತಾಯ ಸಾಧ್ಯವಾಗುತ್ತದೆ. ಹೀಗೆ ಕಡ್ಡಾಯವಾಗಿ ಉಳಿಸಿದ ಹಣ ಆಪತ್ತಿನಲ್ಲಿ ಸಂಪತ್ತಾಗಿ ಪರಿಗಣಿಸುತ್ತದೆ.
ಯಾವುದೇ ಕಾರ್ಯ ಯಶಸ್ವಿಯಾಗಲು ಕಟ್ಟಡ ಕಟ್ಟುವ ಮುನ್ನ ನೀಲಿನಕ್ಷೆ (Blue Print) ತಯಾರಿಸಿ, ನಕ್ಷೆಯಲ್ಲಿ ನಮೂದಿಸಿದಂತೆ ಕಾರ್ಯ ನಿರ್ವಹಿಸುವ ಹಾಗೆ, ಆದಾಯ ತೆರಿಗೆಗೆ ಒಳಗಾಗುವ ಪ್ರತಿಯೊಬ್ಬ ವ್ಯಕ್ತಿಯೂ ಏಪ್ರಿಲ್ ಒಂದರಿಂದಲೇ ತನ್ನ ಆದಾಯಕ್ಕೆ ಅನುಗುಣವಾಗಿ ಬರಬಹುದಾದ ತೆರಿಗೆಯನ್ನು ಪರಿಗಣಿಸಿ, ತೆರಿಗೆ ಉಳಿಸಲು, ಉಳಿತಾಯದ ಯೋಜನೆ ಸಿದ್ಧಪಡಿಸಿ, ಅದರಂತೆ ನಡೆದುಕೊಂಡಲ್ಲಿ ತೆರಿಗೆಯ ಭಾರ ಹಗುರವಾಗಿ ಆರ್ಥಿಕ ಭದ್ರ ಬುನಾದಿ ಹಾಕಿದಂತಾಗುತ್ತದೆ.
ಸೆಕ್ಷನ್ 87 ಆಧಾರದ ಮೇಲೆ, ವೈಯಕ್ತಿಕ ಆದಾಯ ತೆರಿಗೆಯವರಿಗೆ ಅವರ ಆದಾಯ ₹ 5 ಲಕ್ಷದೊಳಗೆ ಇರುವಲ್ಲಿ, ₹ 2,000 ವಿನಾಯತಿ ತೆರಿಗೆಯಲ್ಲಿ ಪಡೆಯಬಹುದು. ಹೀಗೆ ವಿನಾಯ್ತಿ ಪಡೆಯುವಾಗ ₹ 2000 ತೆರಿಗೆ ಅಥವಾ ನಿಜವಾಗಿ ಪಾವತಿಸುವ ತೆರಿಗೆ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಬೇಕು.
*ಸಂಬಳ ಪರಿಷ್ಕರಣೆಯಿಂದಾಗಿ ಬರುವ ಸಂಬಳ ಹಿಂಬಾಕಿಯಲ್ಲಿ ಆದಾಯ ತೆರಿಗೆ ವಿನಾಯತಿ ಪಡೆಯುವ ಸೌಲತ್ತು.
ಈ ಆರ್ಥಿಕ ವರ್ಷದಲ್ಲಿ, ಬ್ಯಾಂಕ್ ನೌಕರರ ಸಂಬಳ ಪರಿಷ್ಕರಣೆಯಾಗಿದ್ದು, 2012 ರಿಂದಲೇ ಸಂಬಳ ಹೆಚ್ಚಳದ ಹಿಂಬಾಕಿ (Salary Arrears) ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಸೆಕ್ಷನ್ 89(1) ಆಧಾರದ ಮೇಲೆ ಯಾವುದೇ ನೌಕರರು, ಸಂಬಳ ಪರಿಷ್ಕರಣೆಯಿಂದಾಗಿ, 3 ವರ್ಷಗಳ ತನಕ ತಮಗೆ ಬರಬೇಕಾದ, ಸಂಬಳದ ಹಿಂಬಾಕಿ ಪಡೆದಾಗ, ಕ್ರಮವಾಗಿ ಈ ಆದಾಯ ಹಿಂದಿನ ವರ್ಷಗಳಿಗೆ ಸೇರಿಸಿ, ಅಲ್ಲಿ ಬರತಕ್ಕ ತೆರಿಗೆ ಮಾತ್ರ ಕೊಡಬಹುದಾಗಿದೆ.
ಇದರಿಂದ ಒಮ್ಮೆಲೇ ಪಡೆದಿರುವ ದೊಡ್ಡ ಮೊತ್ತ ಈ ಆರ್ಥಿಕ ವರ್ಷಕ್ಕೆ ಸೇರಿಸಿ ಹೆಚ್ಚಿನ ತೆರಿಗೆ ಪಾವತಿಸುವುದನ್ನು ಕಾನೂನಿನಂತೆ ಕಡಿಮೆ ಮಾಡಿಕೊಳ್ಳಬಹುದು. ಮುಖ್ಯವಾಗಿ ಇತ್ತೀಚೆಗೆ ಸೇವೆಗೆ ಬಂದಿರುವ ನೌಕರರು, ಈ ಅವಕಾಶದಿಂದಾಗಿ, ಬಂದಿರುವ ಸಂಬಳದ ಹಿಂಬಾಕಿಗೆ ಪ್ರಾಯಶಃ ಸಂಪೂರ್ಣ ತೆರಿಗೆ ವಿನಾಯತಿ ಪಡೆಯಬಹುದಾಗಿದೆ.
15.H ಹಾಗೂ 15.G ನಮೂನೆಯ ಫಾರಂಗಳ ಉಪಯೋಗ
ಆರ್ಥಿಕ ವರ್ಷದಲ್ಲಿ, ಬ್ಯಾಂಕ್ ಅಂಚೆ ಕಚೇರಿ ಅಥವಾ ಇನ್ನಿತರ ಠೇವಣಿ ಮೇಲೆ, ₹ 10,000ಕ್ಕಿಂತ ಹೆಚ್ಚಿನ ಬಡ್ಡಿ ಪಡೆಯುವಲ್ಲಿ ಹಾಗೆ ಬರುವ ಬಡ್ಡಿಯ ಶೇ 10 ರಷ್ಟು ಕಡಿತ ಮಾಡಿ, ಆದಾಯ ತೆರಿಗೆ ಕಚೇರಿಗೆ, ಸೆಕ್ಷನ್ 194.A ಆಧಾರದ ಮೇಲೆ, ಠೇವಣಿ ಇರಿಸಿಕೊಂಡ ಸಂಸ್ಥೆ ರವಾನಿಸತಕ್ಕದ್ದು. (ಪ್ಯಾನ್ ಕಾರ್ಡು ಕೊಡದಿರುವಲ್ಲಿ ಶೇ 20 ಕಡಿತವಾಗುತ್ತದೆ) ಆದರೆ, ಆದಾಯ ತೆರಿಗೆಗೆ ಒಳಗಾಗದವರು, ಪ್ರತಿ ವರ್ಷ, ಏಪ್ರಿಲ್ ಒಂದನೇ ವಾರದೊಳಗೆ, 60 ವರ್ಷದೊಳಗಿರುವ ವ್ಯಕ್ತಿಗಳು 15G, 60 ವರ್ಷ ದಾಟಿದ ವ್ಯಕ್ತಿಗಳು 15.H ನಮೂನೆ ಫಾರಂ ದ್ವಿಪ್ರತಿಯಲ್ಲಿ ಸಲ್ಲಿಸಿದಲ್ಲಿ, ಆಯಾ ಸಂಸ್ಥೆಗಳು ಶೇ 40 ಬಡ್ಡಿಯಲ್ಲಿ ಕಡಿತ ಮಾಡುವುದಿಲ್ಲ.
ಸಂಬಳ ಪಡೆಯುವ ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬ ಇವರು ಪ್ರತಿ ವರ್ಷ, 31 ಜುಲೈ ಒಳಗಾಗಿ ಆದಾಯ ತೆರಿಗೆ ರಿಟರ್ನ್ ಅನ್ನು, ಸಂಬಂಧಪಟ್ಟ ಆದಾಯ ತೆರಿಗೆ ಕಚೇರಿಗೆ ಸಲ್ಲಿಸಬೇಕು. ಹಾಗೆ ಸಲ್ಲಿಸದಿರುವಲ್ಲಿ ಸೆಕ್ಷನ್ 139(1) ಪ್ರಕಾರ ₹ 5,000 ದಂಡ ತೆರಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಫಾರಂ ಮುಖಾಂತರವೂ ಅಥವಾ ಆನ್ ಲೈನ್ನಲ್ಲಿಯೂ ತುಂಬಬಹುದು. ಹೀಗೆ ತುಂಬುವಾಗ ‘ಪ್ಯಾನ್ ಕಾರ್ಡ್’ ಕಡ್ಡಾಯವಾಗಿ ನಮೂದಿಸಬೇಕು. ಹಣ ಮರಳಿ (ರಿಫಂಡ್) ಪಡೆಯುವುದಕ್ಕೆ ಬ್ಯಾಂಕ್ ಖಾತೆ ನಂ. IFSC Code ನಮೂದಿಸಬೇಕು.
ವೈಯಕ್ತಿಕ ಆದಾಯ ತೆರಿಗೆದಾರರು ಗಮನಿಸಬೇಕಾದ ವಿಚಾರಗಳು
*ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಲು ಎಂದಿಗೂ ಮರೆಯಬಾರದು. ಇದು ಇಳಿವಯಸ್ಸಿನ ‘ಬ್ರೆಡ್–ಬಟರ್’ ಎನ್ನುವುದನ್ನು ನೆನಪಿಡಿ. ಪ್ರತಿ ವರ್ಷ ಹೀಗೆ ಉಳಿಸಲು ಏಪ್ರಿಲ್ ಒಂದರಿಂದಲೇ ಯೋಜನೆ ರೂಪಿಸಿ, ಅದರಂತೆ ನಡೆದುಕೊಳ್ಳಿ.*ಎಳೆ ವಯಸ್ಸಿನ ಹದಿ ಹರೆಯದ ತರುಣರಿಗೆ ಗೃಹಸಾಲ ಪಡೆದು ಸ್ಥಿರ ಆಸ್ತಿ ಮಾಡಲು ಇದು ಪರ್ವಕಾಲ. ರಿಸರ್ವ್ ಬ್ಯಾಂಕಿನ ರೆಪೊ ದರ ಕಡಿತದಿಂದಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ದೊರೆಯುತ್ತದೆ. ಜೊತೆಗೆ ಸಾಲದ ಕಂತು (ಸೆಕ್ಷನ್ 80C) ಸಾಲದ ಮೇಲಿನ ಬಡ್ಡಿ (ಸೆಕ್ಷನ್ 24 (b), ಇದುವರೆಗೆ ಕೊಡುವ ಮನೆ ಬಾಡಿಗೆ, ಇವೆಲ್ಲವನ್ನೂ ಪರಿಗಣಿಸಿದಾಗ, ಸಾಲದ ಕಂತಿನ (EMI) ಸಿಂಹಪಾಲು ಇಲ್ಲಿ ಬರುವ ವಿನಾಯತಿಯಿಂದಲೇ ಭರಿಸಬಹುದು.
*ಶಿಕ್ಷಣ ಸಾಲದ ಮೇಲಿನ ಬಡ್ಡಿ ಸೆಕ್ಷನ್ 80E ಆಧಾರದ ಮೇಲೆ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸೌಲತ್ತು ಇರುವುದರಿಂದ, ಇದರ ಉಪಯೋಗ ಪಡೆಯಲು ಮರೆಯಬಾರದು.
ವಿ. ಸೂ.: ಗೃಹಸಾಲ ಹಾಗೂ ಶಿಕ್ಷಣ ಸಾಲ ಇವೆರಡೂ ನಿಜವಾಗಿ ಸಾಲವಾದರೂ ಈ ಎರಡೂ ಯೋಜನೆಗಳು ದೀರ್ಘಾವಧಿ ಹೂಡಿಕೆ ಎನ್ನುವುದನ್ನು ಮರೆಯುವಂತಿಲ್ಲ.
ಗಳಿಸಿದ ಹಣದಲ್ಲಿ ಒಂದಿಷ್ಟು ಉಳಿಸಿ, ಉಳಿದುದನ್ನು ಮಾತ್ರ ಖರ್ಚು ಮಾಡುವುದು ಜಾಣರ ಲಕ್ಷಣ. ಇದರಿಂದ ಕಡ್ಡಾಯ ಉಳಿತಾಯಕ್ಕೆ ನಾಂದಿಯಾಗುತ್ತದೆ. ಜೊತೆಗೆ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ. ಹೀಗೆ ಉಳಿತಾಯ ಮಾಡುವಾಗ ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ಹಣ ಉಳಿಸಿರಿ. ಇದರಿಂದ ತೆರಿಗೆ ಹೊರೆ ತಗ್ಗುತ್ತದೆ. ತೆರಿಗೆ ಉಳಿಸುವ ಸಲುವಾಗಿಯಾದರೂ, ಪ್ರಾರಂಭದಿಂದಲೂ ಕಡ್ಡಾಯವಾಗಿ ಉಳಿಸಿದ ಹಣ, ಮುಂದೆ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮುಂಜಿ, ಹೀಗೆ ಹತ್ತು ಹಲವು ವೆಚ್ಚಗಳಿಗೆ ನೆರವಾಗುತ್ತದೆ.
*ಆದಾಯ ತೆರಿಗೆ ಮಿತಿ ಹಾಗೂ ತೆರಿಗೆ ಕೊಡಬೇಕಾದ ವಿವರ**ವೈಯಕ್ತಿಕ ಆದಾಯ ತೆರಿಗೆ (60 ವರ್ಷ ಒಳಗಿನ ವ್ಯಕ್ತಿಗಳು)
₹ 2.50 ಲಕ್ಷ ತನಕ ಸಂಪೂರ್ಣ ವಿನಾಯಿತಿ
₹ 2.50 ಲಕ್ಷದಿಂದ ₹ 5 ಲಕ್ಷಗಳ ತನಕ ₹ 2.50 ಲಕ್ಷ ದಾಟಿದ ಮೊತ್ತಕ್ಕೆ ಶೇ 10
₹ 5 ಲಕ್ಷದಿಂದ ₹10 ಲಕ್ಷಗಳ ತನಕ ₹25,000 + ಶೇ 20 ₹5 ಲಕ್ಷ ದಾಟಿದ ಮೊತ್ತಕ್ಕೆ
₹ 10 ಲಕ್ಷ ದಾಟಿದ ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10 ಲಕ್ಷ ದಾಟಿದ ಮೊತ್ತಕ್ಕೆ
*60 ವರ್ಷ ದಾಟಿದ ಮತ್ತು 80 ವರ್ಷ ಒಳಗಿನ ವ್ಯಕ್ತಿಗಳು
₹3 ಲಕ್ಷದ ತನಕ ಸಂಪೂರ್ಣ ವಿನಾಯ್ತಿ
₹3 ಲಕ್ಷದಿಂದ ₹5 ಲಕ್ಷಗಳ ತನಕ ₹3 ಲಕ್ಷ ದಾಟಿದ ಮೊತ್ತಕ್ಕೆ ಶೇ10
₹5 ಲಕ್ಷದಿಂದ ₹10 ಲಕ್ಷಗಳ ತನಕ ₹20,000 + ಶೇ 20 ₹ 5 ಲಕ್ಷ ದಾಟಿದ ಮೊತ್ತಕ್ಕೆ
₹10.00 ಲಕ್ಷ ದಾಟಿದ ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10 ಲಕ್ಷ ದಾಟಿದ ಮೊತ್ತಕ್ಕೆ
*80 ವರ್ಷ ದಾಟಿದ ವ್ಯಕ್ತಿಗಳು
₹ 5 ಲಕ್ಷಗಳ ತನಕ ಸಂಪೂರ್ಣ ವಿನಾಯ್ತಿ
₹ 5 ಲಕ್ಷದಿಂದ – ₹ 10 ಲಕ್ಷಗಳ ತನಕ ₹5.00 ಲಕ್ಷ ದಾಟಿದ ಮೊತ್ತಕ್ಕೆ ಶೇ 20
₹ 10 ಲಕ್ಷ ದಾಟಿದ ಮೊತ್ತಕ್ಕೆ ₹1 ಲಕ್ಷ + ಶೇ 30 ₹ 10 ಲಕ್ಷ ದಾಟಿದ ಮೊತ್ತಕ್ಕೆ.
ಸರ್ಚಾರ್ಜ್
ವಾರ್ಷಿಕ ₹ 1 ಕೋಟಿ ಆದಾಯ ಇರುವವರು ಮಾತ್ರ ಆದಾಯ ತೆರಿಗೆ ಹೊರತುಪಡಿಸಿ, ಶೇ 10 ಸರ್ಚಾರ್ಜ್ ಕೊಡತಕ್ಕದ್ದು.
ಶಿಕ್ಷಣ ಸೆಸ್
ಆದಾಯ ತೆರಿಗೆಯ ಮೇಲೆ ಶೇ 3ರಷ್ಟು ಶಿಕ್ಷಣ ಉಪ ಕರ ಕೊಡತಕ್ಕದ್ದು. ಈ ತೆರಿಗೆ ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ.
*
ನೌಕರಿಯಲ್ಲಿ ದೊರೆಯುವ ಸಂಬಳದ ಹೊರತಾಗಿ ಪಡೆಯುವ ಭತ್ಯೆ ಹಾಗೂ ವೆಚ್ಚಗಳಿಗಾಗಿ ಪಡೆಯುವ ಹಣ ಇವುಗಳ ವಿನಾಯತಿ
*ಸೆಕ್ಷನ್ 10 (10ಸಿ) ಸ್ವಯಂ ನಿವೃತ್ತಿ (Voluntrary Retirement) ಸರ್ಕಾರ ಅಥವಾ ಸಂಸ್ಥೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಿದಾಗ (Rule 2BA of I.T. Rules) ಗರಿಷ್ಠ ₹ 5 ಲಕ್ಷ ತನಕ, ಇಲ್ಲಿ ಬಂದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯತಿ ಪಡೆಯಬಹುದು.
*ಸೆಕ್ಷನ್ 10 (13ಎ) ಮನೆ ಬಾಡಿಗೆ ಭತ್ಯೆ ಪಡೆದಾಗ:
ಎ) ನಿಜವಾಗಿ ಸಿಕ್ಕಿರುವ ಮನೆಬಾಡಿಗೆ
ಬಿ) ಸಂಬಳದ ಶೇ 10 ರಷ್ಟು ಬಾಡಿಗೆ ಕೊಟ್ಟಾಗ
ಸಿ) ಶೇ 40 ರಷ್ಟು ಸಂಬಳ (ಮಹಾನಗರಗಳಲ್ಲಿ ಶೇ 50)
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.*ಸೆಕ್ಷನ್ 10(ಜಿಜಿ) ಮನೆಬಾಡಿಗೆ ಭತ್ಯೆ ಪಡೆಯದೆ ಬಾಡಿಗೆ ಕೊಡುತ್ತಿರುವಲ್ಲಿ:
ಎ) ಆದಾಯದ ಶೇ 25ರಷ್ಟು
ಬಿ) ಶೇ 10 ಆದಾಯದಷ್ಟು ಬಾಡಿಗೆ ಕೊಟ್ಟಾಗ
ಸಿ) ₹ 2000 ತಿಂಗಳಿಗೆ
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.
*ಸೆಕ್ಷನ್ 10(14) ಕರ್ತವ್ಯಕ್ಕಾಗಿ ತಿರುಗಾಟಕ್ಕೆ ಕೊಡುವ ಭತ್ಯೆ
*ಸೆಕ್ಷನ್ 10(14) ಸಾರಿಗೆ ಭತ್ಯೆ: ಕನ್ವೆಯನ್ಸ ಅಲೊವೆನ್ಸ್ನ ಹಾಗೆ ಮನೆಯಿಂದ ಕಚೇರಿಗೆ– ಕಚೇರಿಯಿಂದ ಮನೆಗೆ ಬರಲು ಕೊಡುವ ಭತ್ಯೆ –ಗರಿಷ್ಠ ₹ 800
*ವೈದ್ಯಕೀಯ ಖರ್ಚು (ಸೆಕ್ಷನ್ 17(2) ಗರಿಷ್ಠ ₹ 15,000 ಉದ್ಯೋಗದಾತರು ಭರಿಸಿದಾಗ.
*ಪ್ರೊಷೇಷನ್ ಟ್ಯಾಕ್ಸ್: ಸಂಪೂರ್ಣ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
*ಸೆಕ್ಷನ್ 24(ಎ): ಬಾಡಿಗೆಗೆ ಬೇರೆಯವರಿಗೆ ಮನೆ ಕೊಟ್ಟಾಗ, ಒಟ್ಟು ಬಾಡಿಗೆಯ ಶೇ 30 ಕಳೆದು ತೆರಿಗೆ ಸಲ್ಲಿಸಬಹುದು. (ದುರಸ್ತ, ವಿಮೆ ತೆರಿಗೆ ಇತ್ಯಾದಿ ಬಾಡಿಗೆಯಿಂದ ಕಡಿತ ಮಾಡುವಂತಿಲ್ಲ.)
*ಸೆಕ್ಷನ್ 24(ಬಿ) ಗೃಹಸಾಲದ ಬಡ್ಡಿ ಗರಿಷ್ಠ ₹ 2 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.
ಬಂಡವಾಳ ಲಾಭ ತೆರಿಗೆ (Capital Gain Tax)
ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಸೆಕ್ಷನ್ 48 ಆಧಾರದ ಮೇಲೆ– ಚಿನ್ನದ ಬಾಂಡುಗಳು ಹಳ್ಳಿ ವ್ಯವಸಾಯದ ಭೂಮಿ ಹಾಗೂ ಸ್ವಂತ ಉಪಯೋಗದ ಒಡವೆಗಳಿಗೆ ಅನ್ವಯಸುವುದಿಲ್ಲ. ಸೆಕ್ಷನ್ 54EC ಆಧಾರದ ಮೇಲೆ ಗರಿಷ್ಠ ₹ 50 ಲಕ್ಷ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪರೇಷನ್ ಇವುಗಳಲ್ಲಿ 3 ವರ್ಷಗಳ ಅವಧಿಗೆ ಇರಿಸಿ, ತೆರಿಗೆ ವಿನಾಯತಿ ಪಡೆಯಬಹುದು.
ವಿ.ಸೂ.: ಕ್ಯಾಪಿಟಲ್ಗೇನ್ ಟ್ಯಾಕ್ಸ್ ಲೆಕ್ಕ ಹಾಕುವಾಗ, ಬರುವ ಲಾಭದಲ್ಲಿ ಹಣದುಬ್ಬರ ಸೂಚ್ಯಂಕ ವೆಚ್ಚದ (Cost Inflation Index) ಕಳೆದು ತೆರಿಗೆ ಸಲ್ಲಿಸಬಹುದು. 1981–82 ಆಧಾರ ವರ್ಷ (100) ಎಂಬುದಾಗಿ ಇಟ್ಟುಕೊಂಡಲ್ಲಿ 2014–15ರಲ್ಲಿ ಇದು 1024 ಆಗಿರುತ್ತದೆ.
ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಗಳಿಸುವ ಆದಾಯದಲ್ಲಿ ಶೇಖಡಾವಾರು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕು. ಇದನ್ನು ಆದಾಯ ತೆರಿಗೆ ಎನ್ನುತ್ತಾರೆ. ಇದು ಸಂಸತ್ತು ರಚಿಸಿದ ಆದಾಯ ತೆರಿಗೆ ಕಾಯ್ದೆಯಡಿ ಬರುತ್ತದೆ. ಆದಾಯ ತೆರಿಗೆ ಇಲಾಖೆ ಕಂದಾಯ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ವ್ಯಕ್ತಿ ಅಥವಾ ಸಂಸ್ಥೆ ಗಳಿಸಿದ ಆದಾಯದಲ್ಲಿ ನಿಗಧಿಪಡಿಸಿದ ಶೇಖಡಾವಾರು ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಇದನ್ನು ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ವರ್ಷದ ಜುಲೈನಲ್ಲಿ ಮಾಡಬೇಕಾಗುತ್ತದೆ.ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ ಗಳಿಸಿದ ಆದಾಯವನ್ನು ಆದಾಯ ತೆರಿಗೆ ಲೆಕ್ಕ (ಕ್ಯಾಲ್ಯುಕ್ಲೇಟಿಂಗ್ ಇನ್ಕಮ್ ಟ್ಯಾಕ್ಸ್) ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಏಪ್ರಿಲ್ 1, 2015 ರಿಂದ ಮಾರ್ಚ್ 31, 2016 ಒಂದು ಆರ್ಥಿಕ ವರ್ಷ(ಫೈನಾನ್ಷಿಯಲ್ ಇಯರ್), ಇದನ್ನು ಪ್ರೀವಿಯಸ್ ಇಯರ್ ಅಂತಲೂ ಕರೆಯುತ್ತಾರೆ.
ಮೇಲೆ ತಿಳಿಸಿರುವಂತೆ ಪ್ರೀವಿಯಸ್ ಇಯರ್ ನಂತರ ಬರುವ 12 ತಿಂಗಳುಗಳನ್ನು ಅಸ್ಸೆಸ್ಮೆಂಟ್ ಇಯರ್(ಮೌಲ್ಯಮಾಪನ ವರ್ಷ) ಎಂದು ಕರೆಯುತ್ತಾರೆ. ಈ ಕಾಲಾವಧಿಯಲ್ಲಿ ಹಿಂದಿನ ವರ್ಷದ ಆದಾಯ ತೆರಿಗೆಯನ್ನು ಪಾವತಿಸಬೇಕಿರುತ್ತದೆ.
ಉದಾಹರಣೆಗೆ: 2015-16 ಫೈನಾನ್ಷಿಯಲ್ ಇಯರ್(ಆರ್ಥಿಕ ವರ್ಷ) ಆದರೆ 2016-17 ಅಸ್ಸೆಸ್ಮೆಂಟ್ ಇಯರ್(ಮೌಲ್ಯಮಾಪನ ವರ್ಷ) ಆಗುತ್ತದೆ. ಹಿಂದಿನ 2015-16 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ ತೆರಿಗೆಯನ್ನು 2016-17 ರಲ್ಲಿ ಪಾವತಿಸಬೇಕಿರುತ್ತದೆ.
ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್)ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಎನ್ನುವುದು ಆದಾಯ ತೆರಿಗೆ ಇಲಾಖೆ ನೀಡುವ ಹತ್ತು ಅಂಕಿಗಳ ಕಾರ್ಡ್ ಆಗಿದ್ದು, ಇದು ಭಾರತೀಯ ನಾಗರೀಕನ ಅಧಿಕೃತ ಗುರುತಿನ ಪುರಾವೆಯೂ ಆಗಿದೆ.
ಪಾನ್ ಕಾರ್ಡ್ ಈ ಕೆಳಗಿನ ಸಂದರ್ಭಗಳಲ್ಲಿ ಬೇಕಾಗುತ್ತದೆ.
1. ನೀವು ಆದಾಯ ತೆರಿಗೆ ಪಾವತಿಸುವಾಗ
2. ಬ್ಯಾಂಕ್ ಖಾತೆ ಅಥವಾ ಡಿಮ್ಯಾಟ್ ಖಾತೆ ತೆರೆಯುವಾಗ
3. ದೂರವಾಣಿ ಸಂಪರ್ಕ ಮತ್ತು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ
4. ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆಗೆ ನೋಂದಾಯಿಸಿಕೊಳ್ಳುವಾಗ
5. ವಾಹನ ಖರೀದಿ ಮತ್ತು ಮಾರಾಟ ಮಾಡುವಾಗ
6. ರೂ. 50 ಸಾವಿರಕ್ಕಿಂತ ಹೆಚ್ಚು ಮೊತ್ತದ ಹಣವನ್ನು ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಜಮಾ ಮಾಡುವಾಗ.
7. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವಾಗ
8. ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಸುವಾಗ
9. ರೂ. 25 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವಿದೇಶೀ ಹಣವನ್ನು ವಿನಿಮಯ ಮಾಡಿಕೊಳ್ಳುವಾಗ
ಮೇಲಿನ ಸಂದರ್ಭಗಳಲ್ಲಿ ನಿಮಗೆ ಪಾನ್ ಕಾರ್ಡ್ ಅವಶ್ಯಕತೆ ಇರುತ್ತದೆ.
ಒಂದಕ್ಕಿಂದ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಶಿಕ್ಷಾರ್ಹ ಅಪರಾಧ
ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ನೀವು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದರೆ ರೂ. 10,000 ವರೆಗೂ ದಂಡ ವಿಧಿಸುವ ಸಾಧ್ಯತೆ ಇದ್ದು ಜೈಲುವಾಸವನ್ನೂ ಅನುಭವಿಸಬೇಕಾಗಿ ಬರಬಹುದು. ಒಂದಕ್ಕಿಂತ ಹೆಚ್ಚು ಪಾನ್ ಸಂಖ್ಯೆ ಹೊಂದಿದ್ದರೆ, ಯಾವುದಾದರೂ ಒಂದನ್ನು ಮಾತ್ರ ನೀವು ತೆರಿಗೆ ಇಲಾಖೆಯಲ್ಲಿ ನೀಡಿ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಪಾನ್ ಕಾರ್ಡ್ ದುರುಪಯೋಗ ತಡೆಯಲೆಂದೇ ಕೇಂದ್ರ ಸರ್ಕಾರ ಈಗ ಪಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡುತ್ತಿದೆ.
ನಿಮ್ಮ ಪಾನ್ ಕಾರ್ಡ್ ವಿವರಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟಿನಲ್ಲಿ ನೋಡಬಹುದು. ಒಂದು ವೇಳೆ ನೀವು ಖಾಸಗಿ ಏಜೆಂಟರ ಮೂಲಕ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೆ, ಸರ್ಕಾರದ ವೆಬ್ಸೈಟ್ ನಲ್ಲಿ ನಿಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ.
ಪಾನ್ ಕಾರ್ಡ್ ಹೊಂದಿರುವ ಮಾತ್ರಕ್ಕೆ ನೀವು ಆದಾಯ ತೆರಿಗೆ ಪಾವತಿಸಬೇಕು ಅಂತೇನಿಲ್ಲ. ನಿಮ್ಮ ಆದಾಯವು ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆದಿದೆ ಎಂದಾಗ ಪಾವತಿಸಲು ಅನುಕೂಲವಾಗುತ್ತದೆ.
ಪಾನ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಫಾರ್ಮ್-49ಎ ತುಂಬಿ ವಿಳಾಸ ಪುರಾವೆಯನ್ನು (ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ) ನಕಲನ್ನು ಲಗತ್ತಿಸಿ ಪಾನ್ ಕಾರ್ಡ್ ಗಾಗಿ ಸಲ್ಲಿಸಬಹುದು. ಫಾರ್ಮ್ -49ಎ ಅನ್ನು ಕೆಳಗಿನ ವೆಬ್ಸೈಟಿನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.